ನಂಜುಂಡಯ್ಯ ಎಚ್, ವಿ
1860-1920. ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಕುಲಪತಿ. ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರು, ಅವರ ತಾಯಿ ವಾಣಿವಿಲಾಸ ಸನ್ನಿಧಾನ, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಇವರ ತೀವ್ರ ಆಸಕ್ತಿಯ ಪರಿಣಾಮವಾಗಿಯೇ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು. ಅದಕ್ಕೆ ಮೊದಲು ಬೆಂಗಳೂರಿನ ಸೆಂಟ್ರಲ್ ಕಾಲೇಜು, ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜು ಮದ್ರಾಸು ವಿಶ್ವವಿದ್ಯಾನಿಲಯಕ್ಕೆ ಸೇರಿದ್ದುವು. ದೂರದ ಮದ್ರಾಸ್ ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೆ ಸೇರಿದ್ದ ಈ ಕಾಲೇಜುಗಳ ಅಭಿವೃದ್ಧಿ ಕುಂಠಿತಗೊಂಡಿತ್ತು. ಅಲ್ಲದೆ ರಾಜ್ಯದ ಶಿಕ್ಷಣಾಕಾಂಕ್ಷಿಗಳು ತುಂಬ ತೊಂದರೆ ಅನುಭವಿಸಬೇಕಾಗಿತ್ತು. ಇದನ್ನರಿತ ಮೈಸೂರು ಸರ್ಕಾರ ಸಂಸ್ಥಾನದ ಔದ್ಯೋಗಿಕ ಅಭಿವೃದ್ಧಿಗೆ ಸಹಾಯಕವಾಗುವಂಥ ಹಾಗೂ ದೇಶಭಾಷೆಯನ್ನು ಊರ್ಜಿತಗೊಳಿಸಬಲ್ಲ ಸ್ವತಂತ್ರ ವಿಶ್ವವಿದ್ಯಾನಿಲಯ ಅತ್ಯಂತ ಅಗತ್ಯವೆಂಬುದನ್ನು ಆಳರಸರಿಗೆ ತೋರಿಸಿ ಕೊಟ್ಟಿತು. ಅಂದು ವಿದ್ಯಾವಿಭಾಗದ ಕೌನ್ಸಿಲರ್ ಆಗಿದ್ದ ನಂಜುಂಡಯ್ಯನವರು ದೇಶವಿದೇಶಗಳ ವಿಶ್ವವಿದ್ಯಾನಿಲಯಗಳ ಆಡಳಿತಕ್ರಮ, ಪಠ್ಯಕ್ರಮಗಳನ್ನು ತರಿಸಿ ಯೋಜನೆ ಸಿದ್ಧಗೊಳಿಸಿದರು. 1914-15ರಲ್ಲಿ ಸರ್ ಹಾರ್‍ಕೋರ್ಟ್ ಬಟ್ಲರ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾನಿಲಯ ನಿಯೋಗ ಒಂದು ಮೈಸೂರಿಗೆ ಬಂದು, ಮೈಸೂರಿನ ಯೋಜನೆಗೆ ಸಮ್ಮತಿ ನೀಡಿತು.

	ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಕುಲಾಧಿಪತಿ ಆಳಿದ ಮಹಾಸ್ವಾಮಿ ಶ್ರೀ ಕೃಷ್ಣರಾಜ ಒಡೆಯರು, ಪ್ರಥಮ ಕುಲಸಚಿವರು ಮಿ. ಡೆನ್‍ಹ್ಯಾಮ್. 1916ರಲ್ಲಿ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯ 1917ರಲ್ಲಿ ಸ್ವಾಯತ್ತತೆ ಪಡೆಯಿತು. ಬೆಂಗಳೂರಿನಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳಿಗೂ ಮೈಸೂರಿನಲ್ಲಿ ಭಾಷೆ, ಚರಿತ್ರೆ, ಅರ್ಥಶಾಸ್ತ್ರ, ವೇದಾಂತ ವಿಷಯಗಳಿಗೂ ಅನುವು ಮಾಡಿಕೊಡಲಾಯಿತು. ವಿಶ್ವವಿದ್ಯಾನಿಲಯದ ಶಿಕ್ಷಣಮಟ್ಟವನ್ನು ಕಾಪಾಡಿಕೊಂಡು ಬರಲು ದೇಶವಿದೇಶದ ಪ್ರಖ್ಯಾತ ಪ್ರಾಧ್ಯಾಪಕರನ್ನು ನಂಜುಂಡಯ್ಯನವರು ಆಹ್ವಾನಿಸಿ ನೇಮಿಸಿಕೊಂಡರು. ಅವರಲ್ಲಿ ಎಸ್. ರಾಧಾಕೃಷ್ಣನ್(1918), ರಾಧಾಕುಮದ ಮುಖರ್ಜಿ, ಕೆ.ಟಿ. ಷಾ, ಎ.ಆರ್. ವಾಡಿಯ, ಬಿ.ಎಂ. ಶ್ರೀಕಂಠಯ್ಯ, ಆರ್. ನರಸಿಂಹಾಚಾರ್, ಎನ್.ಎಸ್. ಸುಬ್ಬರಾವ್, ಟೇಟ್, ಮ್ಯಾಕಿಂಟಾಷ್, ಮೆಟ್‍ಕಾಫ್ ಮುಂತಾದವರು ಪ್ರಸಿದ್ಧರು.

	ಕನ್ನಡ ಜನತೆಗೆ ಇವರು ಇತ್ತ ಮತ್ತೊಂದು ಬಳುವಳಿ ಕನ್ನಡ ಸಾಹಿತ್ಯ ಪರಿಷತ್ತು. 1919ನೆಯ ಇಸವಿಯಲ್ಲಿ ಪರಿಷತ್ತು ಅಸ್ತಿತ್ವಕ್ಕೆ ಬಂತು. `ಇಂಡಿಯ ದೇಶಕ್ಕೆ ಒಂದೇ ಭಾಷೆ ಆಗುವುದೆಂಬ ಕನಸು ಬೇಗ ಸಿದ್ಧಿಸುವುದಿಲ್ಲ. ಜನಸಾಮಾನ್ಯರ ಭಾಷೆ ಇಂಗ್ಲಿಷ್ ಆಗಲಾರದು. ಒಂದು ದೇಶದ ಪ್ರಗತಿ ಮಧ್ಯಮವರ್ಗದವರಿಂದಲೇ ಆಗಬೇಕು. ಇವರಲ್ಲಿ ಒಂದು ಮಟ್ಟದ ವಿದ್ಯಾಭ್ಯಾಸ ಸಾಧ್ಯವಾಗಬೇಕಾದರೆ ಅದು ದೇಶಭಾಷೆಯಲ್ಲೇ ಆಗಬೇಕು.' ಇದು ನಂಜುಂಡಯ್ಯನವರು ನಂಬಿದ್ದ ಸಿದ್ಧಾಂತ. ಈ ಕೆಲಸ ಆಗಬೇಕಾದರೆ ಕನ್ನಡಕ್ಕಾಗಿ ದುಡಿಯುವವರೆಲ್ಲ ಒಂದೆಡೆ ಸೇರಿ, ಚರ್ಚಿಸಿ, ಪೂರಕ ಗ್ರಂಥಗಳನ್ನು ಕನ್ನಡದಲ್ಲಿ ತರಬೇಕು. ಈ ಪರಮಗುರಿಯನ್ನು ಹೊತ್ತು ಪರಿಷತ್ತು ಆರಂಭವಾಯಿತು. ಇಂದಿಗೂ ಆ ಕಾರ್ಯ ನಡೆಯುತ್ತಿದೆ. ಪರಿಷತ್ತಿನ ಪ್ರಥಮ ಕಾರ್ಯದರ್ಶಿ ಎಂ.ಎಸ್. ಪುಟ್ಟಣ್ಣನವರು.

ಕನ್ನಡದ ಬಗೆಗೆ, ಕನ್ನಡ ಸಂಸ್ಕøತಿ-ಶಿಕ್ಷಣಗಳ ಬಗೆಗೆ ನಿಷ್ಠಾವಂತ ಸೇವೆ ಮಾಡಿದ ಇವರು ಆಂಧ್ರಪ್ರದೇಶದಿಂದ ಬಂದವರು. ಮನೆಮಾತು ತೆಲುಗು. ತಂದೆ ಸುಬ್ಬಯ್ಯ, ತಾಯಿ ಅನ್ನಪೂರ್ಣಮ್ಮ. ನಡೆಸಿದ್ದು ಬಡತನದ ಜೀವನ. ವ್ಯಾಸಂಗವೇತನ ಪಡೆದು ವ್ಯಾಸಂಗ. ಮೈಸೂರಿನ ವೆಸ್ಲಿಯನ್ ಪ್ರೌಢಶಾಲೆ ಹಾಗೂ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ವ್ಯಾಸಂಗಮಾಡಿ 1880ರಲ್ಲಿ ಬಿ.ಎ.ಪದವಿ ಪಡೆದರು. ಅನಂತರ ಬಿ.ಎಲ್., ಎಂ.ಎಲ್.(1893) ಪದವಿ ಪಡೆದರು. ಮೊದಲು ನಂಜನಗೂಡಿನ ಮುನ್ಸೀಫ್(1885) ಆದರು. ಅನಂತರ ಹಾಸನದ ಅಸಿಸ್ಟೇಂಟ್ ಕಮೀಷನರ್(1886), ಬೆಂಗಳೂರಿನ ಸಬ್ ಜಡ್ಜ್(1892), ಮದ್ರಾಸ್ ವಿಶ್ವವಿದ್ಯಾನಿಲಯದ ಫೆಲೋ(1895), ಮೈಸೂರು ಸಂಸ್ಥಾನದ ಅಧೀನಕಾರ್ಯದರ್ಶಿ, ಶಿವಮೊಗ್ಗೆಯ ಜಿಲ್ಲಾಧಿಕಾರಿ(1897), ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯ ನ್ಯಾಯಾಧೀಶ, ಅಂತಿಮವಾಗಿ ವಿದ್ಯಾ ಇಲಾಖೆಯ ಪ್ರಧಾನ ಆಡಳಿತಾಧಿಕಾರಿ ಹಾಗೂ ಕೌನ್ಸಿಲರ್ ಆಗಿ 1916ರಲ್ಲಿ ನಿವೃತ್ತರಾದರು.

	ನ್ಯಾಯಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ವಿದ್ವಾಂಸರಾದ ಇವರು ಆ ವಿಷಯಗಳನ್ನು ಕುರಿತಾದ ಕೆಲವು ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ಮನ್ನಣೆಯಿಲ್ಲದ ಕಾಲದಲ್ಲಿ ಕನ್ನಡದಲ್ಲಿ ಗ್ರಂಥರಚಿಸಲು ಆರಂಭಿಸಿದವರಲ್ಲಿ ಇವರೂ ಒಬ್ಬರು. ವ್ಯವಹಾರದೀಪಿಕೆ (1890), ವ್ಯವಹಾರಧರ್ಮಶಾಸ್ತ್ರ (1917), ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್) (1915), ಅರ್ಥಶಾಸ್ತ್ರ (1901), ಲೇಖ್ಯಬೋಧಿನಿ, ರಿಲಿಜನ್ ಅಂಡ್ ಮಾರಲ್ ಎಜುಕೇಷನ್ ಗ್ರಂಥಗಳನ್ನೂ ನೂರಾರು ವಿದ್ವತ್‍ಪೂರ್ಣ ಲೇಖನಗಳನ್ನೂ ಇವರು ಪ್ರಕಟಿಸಿದ್ದಾರೆ. 1913ರಲ್ಲಿ ಅಂದಿನ ಮಹಾರಾಜರು ಇವರಿಗೆ ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು. 1914ರಲ್ಲಿ ಬ್ರಿಟಿಷ್ ಸರ್ಕಾರ ಸಿ.ಐ.ಇ. ಬಿರುದನ್ನು ಕೊಟ್ಟು ಗೌರವಿಸಿತು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪದವಿಯಲ್ಲಿದ್ದಾಗಲೇ ಇವರು ನಿಧನರಾದರು(ಮೇ 1920).
(ಜೆ.ಎಸ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ